ದಹೋಮೀ
ಪಶ್ಚಿಮ ಆಫ್ರಿಕದ ಒಂದು ಗಣರಾಜ್ಯ.  ಪಶ್ಚಿಮದಲ್ಲಿ ಟೋಗೋ ಗಣರಾಜ್ಯ.  ವಾಯುವ್ಯದಲ್ಲಿ ಉತ್ತರ ವಾಲ್ಟ, ಈಶಾನ್ಯದಲ್ಲಿ ನೈಜರ್ ಗಣರಾಜ್ಯ, ಪೂರ್ವದಲ್ಲಿ ನೈಜೀರಿಯ, ದಕ್ಷಿಣದಲ್ಲಿ ಅಟ್ಲಾಂಟಿಕ್ ಸಾಗರದ ಗಿನೀ ಖಾರಿ-ಇವು ಇದರ ಮೇರೆಗಳು.  ವಿಸ್ತೀರ್ಣ 1,12,600 ಚ.ಕಿಮೀ. (43,500 ಚ.ಮೈ.), ಜನಸಂಖ್ಯೆ 27,18,000 (1970).  ರಾಜಧಾನಿ ಪೋರ್ಟನೋವೋ.

	ಮೇಲ್ಮೈ ಲಕ್ಷಣ :  ದಹೋಮಿಯಲ್ಲಿ ಐದು ಸ್ವಾಭಾವಿಕ ವಿಭಾಗಗಳಿವೆ :  1 ಕರಾವಳಿ ಪ್ರದೇಶ . ಇದು ತಗ್ಗಾಗಿ ಚಪ್ಪಟೆಯಾಗಿದೆ.  ಮರಳಿನಿಂದ ಕೂಡಿದ ನೆಲದ ನಡುವೆ ಅಲ್ಲಲ್ಲಿ ಲಗೂನುಗಳುಂಟು.  ಪಶ್ಚಿಮ ಭಾಗದ ಲಗೂನುಗಳು ಪೂರ್ವದಲ್ಲಿರುವವಕ್ಕಿಂತ ಕಿರಿದು.  2 ಕರಾವಳಿ ಪ್ರದೇಶದ ಹಿಂದೆ ಇರುವುದು ಜೇಡು ಮಣ್ಣಿನ ದಿಣ್ಣೆ ನೆಲ.  ಅಲ್ಲಲ್ಲಿ 1,300 ಅಡಿಗಳವರೆಗೂ ಎತ್ತರವಾಗಿರುವ ಬೆಟ್ಟಗಳುಂಟು.  3 ಅಬೋಮೀ, ಕೇಟೌ, ಅಪ್ಲಾಹೌ ಮತ್ತು ಜನ್ನಾನಾಡೋ ಜಿಲ್ಲೆಗಳಲ್ಲಿ ಪ್ರಸ್ಥಭೂಮಿಗಳು ಹಬ್ಬಿವೆ.  ಹರಳಿನ ತಳದ ಮೇಲೆ ಜೇಡುಮಣ್ಣಿನಿಂದ ಕೂಡಿದ ಇವು 300 ಅಡಿಗಳಿಂದ 750 ಅಡಿಗಳವರೆಗೆ ಎತ್ತರವಾಗಿವೆ.  4 ದೇಶದ ವಾಯುವ್ಯ ಭಾಗದಲ್ಲಿರುವ ಆಟಕೋರ ಪರ್ವತ;  ಟೋಗೋ ಶ್ರೇಣಿಯ ಮುಂದುವರಿದ ಭಾಗ.  ಇದರ ಅತ್ಯುನ್ನತ ಶಿಖರ 2,146 ಅಡಿ ಎತ್ತರವಾಗಿದೆ.  ಇದು ನೈರುತ್ಯದಿಂದ ವಾಯುವ್ಯಾಭಿಮುಖವಾಗಿ ಹಬ್ಬಿದೆ.  5 ದಹೋಮಿಯ ಈಶಾನ್ಯ ಭಾಗ ;  ನೈಜರ್ ನದಿಯ ಮೈದಾನ.  ಇದು ನೈಜರ್ ನದಿಯ ಕಡೆಗೆ ಇಳಿಜಾರಾಗಿದೆ.  ಇಲ್ಲಿಯ ಮಣ್ಣು ಜೇಡು ಮತ್ತು ಮರಳಿನಿಂದ ಕೂಡಿದ್ದು ಭಾಗಶಃ ದಹೋಮಿಯ ಉತ್ತರ ಗಡಿಯಾಗಿ ಹರಿಯುವ ನೈಜರ್ ನದಿಯ ಉಪನದಿಗಳು ಮೆಕ್ರೌ, ಆಲಿ ಬೋರಿ ಮತ್ತು ಸೋಟ.  ಇವು ದಹೋಮಿಯ ಉತ್ತರ ಭಾಗದಲ್ಲಿ ಹರಿಯುತ್ತವೆ.  ದಹೋಮಿಯ ಇತರ ನದಿಗಳ ಪೈಕಿ ಮುಖ್ಯವಾದವು ಮೋನೋ, ಕೌಫೋ ಮತ್ತು ಔಮೀ.  ಟೊಗೋದಲ್ಲಿ ಹುಟ್ಟುವ ಮೋನೋ ನದಿ ದಹೋಮೀ ಹಾಗೂ ಟೋಗೋಗಳ ನಡುವೆ ಗಡಿಯಾಗಿದೆ.  ಕೌಫೋ ನದಿ ದಹೋಮಿಯನ್ ಪ್ರಸ್ಥಭೂಮಿಗಳಿಂದ ದಕ್ಷಿಣಾಭಿಮುಖವಾಗಿ ಕರಾವಳಿಗೆ ಹರಿದು ಅಹೀಮೀಯ ಬಳಿ ಲಗೂನಿನಲ್ಲಿ ಸೇರುತ್ತದೆ.  ಔಮೀ ನದಿ ಆಟಕೋರ ಪರ್ವತದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ 310 ಮೈ. ಹರಿದು ಮುಖದ ಬಳಿ ಎರಡಾಗಿ ಕವಲೊಡೆಯುತ್ತದೆ.  ಒಂದು ಕವಲು ಪೋರ್ಟ-ನೋವೋ ಲಗೂನನ್ನೂ ಇನ್ನೊಂದು ನಕೌವಿ ಸರೋವರವನ್ನೂ ಸೇರುತ್ತದೆ. ಆಟಕೋರ ಪರ್ವತ ವಾಲ್ಟ ಮತ್ತು ನೈಜರ್ ನದೀಪಾತ್ರಗಳ ನಡುವಣ ಜಲವಿಭಾಗರೇಖೆಯಂತಿದೆ.

	ವಾಯುಗುಣ :  ದಹೋಮಿಯಲ್ಲಿ ಎರಡು ವಾಯುಗುಣ ವಲಯಗಳಿವೆ.  ದಕ್ಷಿಣದ್ದು ಸಮಭಾಜಕೀಯ ಪ್ರರೂಪಿ ವಾಯುಗುಣ.  ಇಲ್ಲಿ ವರ್ಷದಲ್ಲಿ ಮಳೆಗಾಲಗಳು ಮತ್ತು ಎರಡು ಒಣಹವೆ ಕಾಲಗಳು ಉಂಟು.  ಮುಖ್ಯವಾದ ಮಳೆಗಾಲ ಮಾರ್ಚ್ ಮಧ್ಯದಿಂದ ಜುಲೈ ಮಧ್ಯದವರೆಗೆ, ಅನಂತರ ಸೆಪ್ಟೆಂಬರ್ ಮಧ್ಯದವರೆಗಿನದು ಒಣಹವೆಯ ಕಾಲ.  ಅನಂತರ ಮತ್ತೆ ನವೆಂಬರ್‍ವರೆಗೆ ಮಳೆಯಾಗುತ್ತದೆ.  ಆಮೇಲೆ ಮಾರ್ಚ್ ಮಧ್ಯದವರೆಗೂ ಮುಖ್ಯವಾದ ಒಣಹವೆಗಾಲ.  ಪೂರ್ವದ ಕಡೆಗೆ ಸಾಗಿದಂತೆ ಮಳೆ ಅಧಿಕವಾಗುತ್ತದೆ.  ದಕ್ಷಿಣ ತೀರದ ಪಶ್ಚಿಮ ತುದಿಯಲ್ಲಿರುವ ಗ್ರ್ಯಾಂಡ್ ಪೋಪೋದಲ್ಲಿ ವರ್ಷಕ್ಕೆ 32" ಮಳೆ ; ಪೂರ್ವತುದಿಯಲ್ಲಿರುವ ಪೋರ್ಟ-ನೋವೋದಲ್ಲಿ 50" ಮಳೆ.  ಉಷ್ಣತೆಯಲ್ಲಿ ಹೆಚ್ಚಿನ ಅಂತರವಿಲ್ಲ ;  220 ಅ (720ಈ) ನಿಂದ 340 ಅ (930ಈ ) ವರೆಗೆ ವ್ಯತ್ಯಾಸವಾಗುತ್ತದೆ.  ಉತ್ತರದ ವಾಯುಗುಣ ವಲಯದಲ್ಲಿ ವರ್ಷದಲ್ಲಿ ಒಂದೇ ಮಳೆಗಾಲ ಮತ್ತು ಒಂದೇ ಒಣಹವೆಯ ಕಾಲ.  ಮೇ-ಸೆಪ್ಟೆಂಬರ್ ಮಳೆಗಾಲ.  ಆಗಸ್ಟ್‍ನಲ್ಲೇ ವಿಶೇಷ ಮಳೆಯಾಗುತ್ತದೆ.  ಮಧ್ಯ ದಹೋಮಿಯಲ್ಲಿ ಆಟಕೋರ ಪರ್ವತಪ್ರದೇಶದಲ್ಲಿ ವರ್ಷಕ್ಕೆ 53" ಮಳೆ ; ಉತ್ತರದಲ್ಲಿ 38".  ಒಣಹವೆಯ ಕಾಲದಲ್ಲಿ ಡಿಸೆಂಬರ್‍ನಿಂದ ಮಾರ್ಚ್‍ವರೆಗೆ ಈಶಾನ್ಯದಿಂದ ಬಿಸಿ ಒಣ ಗಾಳಿ ಬೀಸುತ್ತದೆ.  ಸರಾಸರಿ ಉಷ್ಣತೆ 270 ಅ  (800 ಈ ).  ಆದರೆ ಹಗಲು-ರಾತ್ರಿಗಳ ಉಷ್ಣತೆಗಳ ಅಂತರ ಹೆಚ್ಚು.  ಜನವರಿ ಅತ್ಯಂತ ಸೆಕೆಯ ತಿಂಗಳು.  ಆಗ ಉಷ್ಣತೆ 430ಅ  (1100ಈ) ವರೆಗೂ ಏರುವುದುಂಟು.

	ಸಸ್ಯಪ್ರಾಣಿವರ್ಗ :  ದೇಶದ ದಕ್ಷಿಣ ಭಾಗವನ್ನು ಹಿಂದೆ ಮಳೆಗಾಡು ಆವರಿಸಿತ್ತು.  ಈಗ ಅದನ್ನು ಬಹುತೇಕ ಕಡಿಯಲಾಗಿದೆ.  ನದಿಗಳ ದಂಡೆಗಳ ಮೇಲೆ ಮಾತ್ರ ಅದು ಉಳಿದುಕೊಂಡಿದೆ.  ಈಗ ಅಲ್ಲಿ ಎಣ್ಣೆ ತೆಂಗು ಹಾಗೂ ರೋನಿಯೆರ್ ತೆಂಗನ್ನೂ ಆಹಾರ ಬೆಲೆಗಳನ್ನೂ ಬೆಳೆಯಲಾಗುತ್ತಿದೆ.  ಅಬೋಮಿಯಿಂದ ಉತ್ತರಕ್ಕೆ ಕಾಡು ಹಾಗೂ ಹುಲ್ಲುಗಾವಲಿನ ಮಿಶ್ರಣವನ್ನು ಕಾಣಬಹುದು. ಇನ್ನೂ ಉತ್ತರದಲ್ಲಿ ಬರೀ ಹುಲ್ಲುಗಾವಲು (ಸವಾನ) ಹಬ್ಬಿದೆ.  ತೆಂಗು, ಬೂರುಗ, ಮಹಾಗನಿ ಮತ್ತು ಎಬೊನಿ ಮರಗಳೂ ಇವೆ.

	ದಹೋಮಿಯ ಪ್ರಾಣಿಜೀವನ ವೈವಿಧ್ಯಮಯ.  ಆನೆ, ಚಿರತೆ, ಸಿಂಹ, ಜಿಂಕೆ, ಕೋತಿ, ಕಾಡುಹಂದಿ, ಮೊಸಳೆ, ಕಾಡೆಮ್ಮೆಗಳೂ ಹೆಬ್ಬಾವೂ, ಪಫ್ ಆಡರ್ (ಉದ್ರೇಕಗೊಂಡಾಗ ಮೈಯ ಮೇಲ್ಭಾಗವನ್ನು ಉಬ್ಬಿಸುವ ವಿಷಸರ್ಪ), ಗಿನಿಕೋಳಿ, ಕಾಡು ಬಾತುಕೋಳಿ, ಕವುಜುಗ ಮುಂತಾದವೂ ಇವೆ.

	ಜನ :  ರಾಜ್ಯದ ಒಟ್ಟು ಜನರಲ್ಲಿ ಸು. 2/3 ರಷ್ಟು ಜನ ದಕ್ಷಿಣದಲ್ಲಿ ವಾಸಿಸುತ್ತಾರೆ.  ದೇಶದಲ್ಲಿ ವಿವಿಧ ನೀಗ್ರೊ ಬಣಗಳ ಜನರಿದ್ದಾರೆ.  ಬಹುಮಂದಿ ಸಾಂಪ್ರದಾಯಿಕ ಪದ್ಧತಿ ಹಾಗೂ ನಂಬಿಕೆಗಳನ್ನು ಅನುಸರಿಸುವವರು. 65% ಜನ ಸರ್ವಚೇತನ ಪಂಥದವರು. 15% ಕ್ರೈಸ್ತರು, 13% ಮುಸಲ್ಮಾನರು (1975). ನೀಗ್ರೋಗಳ ಪ್ರಧಾನ ಬಣಗಳು ದಕ್ಷಿಣದ ಫಾನ್ ಮತ್ತು ಅಡ್ವ ; ವಾಯುವ್ಯದ ಬರಿಬ.  ಬಣದ ರಾಜ ಸತ್ತರೆ ಅವನ ಹಿಂದೆ ಪರಲೋಕಕ್ಕೆ ಹೋಗಲು ಸ್ತ್ರೀಪುರುಷರು ಹಾಗೂ ಮಕ್ಕಳನ್ನು ಬಲಿಕೊಡುವ ಪದ್ಧತಿ ಈ ರಾಜ್ಯದಲ್ಲಿತ್ತು.  ರಾಜ್ಯದ ದೊರೆ ಗೆಜ್ಜೊ (1818-58) ನರಬಲಿಯನ್ನು ಬಹು ಮಟ್ಟಿಗೆ ತಪ್ಪಿಸಿದ.  ರಾಜನ ಸೈನ್ಯದಲ್ಲಿ ಸ್ತ್ರೀಯರೂ ಇದ್ದರು.  ಕಾನಾ ನಗರದಿಂದ ಹೊರಟ ಸೈನ್ಯದಲ್ಲಿ 2,500 ಮಂದಿ ಅಮೆeóÁನ್ ಸ್ತ್ರೀಯರ ಪಡೆಯನ್ನು ನೋಡಿದುದಾಗಿ ರಿಚರ್ಡ್ ಬರ್ಟನ್ (1821-90) ತಿಳಿಸಿದ್ದಾನೆ.

	ರಾಜ್ಯಭಾಷೆ ಫ್ರೆಂಚ್.  ಪ್ರತಿ ಬಣಕ್ಕೂ ಅದರದೇ ಭಾಷೆಯುಂಟು.  ಜನರ ಪ್ರಧಾನ ವೃತ್ತಿ ಬೇಸಾಯ.

	ದಹೋಮಿಯ ಪ್ರಮುಖ ಪಟ್ಟಣಗಳು ಇವು :  ಪೋರ್ಟ-ನೋವೋ (ರಾಜಧಾನಿ) (87,000) (1970), ಕೋಟನೂ(2,08,000) ಮತ್ತು ಪ್ಯಾರಕೂ (18,000).

	ಇತಿಹಾಸ :  12 ಮತ್ತು 13ನೆಯ ಶತಮಾನದಲ್ಲಿ ದಹೋಮೀ ಪ್ರದೇಶದಲ್ಲಿ ಆಫ್ರಿಕದ ಅನೇಕ ಬಣ ರಾಜ್ಯಗಳಿದ್ದವು.  17ನೆಯ ಶತಮಾನದ ಹೊತ್ತಿಗೆ ನಿಗ್ರೋ ರಾಜ್ಯವೊಂದು ಸ್ಥಾಪಿತವಾಗಿ ಉತ್ತರದಿಂದ ದಕ್ಷಿಣದ ಕಡಲಂಚಿನವರೆಗೆ ವ್ಯಾಪಿಸಿತು.  ಅದರ ರಾಜಧಾನಿ ಅಬೋಮಿ.  ಅಮೆeóÁನ್ ಸ್ತ್ರೀಯರು ರಾಜನ ಸೈನ್ಯದಲ್ಲಿದ್ದು ಯುದ್ಧಗಳಲ್ಲಿ ಭಾಗವಹಿಸುತ್ತಿದ್ದು.  ಅದೇ ಶತಮಾನದಲ್ಲಿ ಯುರೋಪ್ ರಾಷ್ಟ್ರಗಳು ನಿಗ್ರೋಗಳನ್ನು ಗುಲಾಮರನ್ನಾಗಿ ಕೊಳ್ಳಲು ರಾಜ್ಯದ ತೀರದಲ್ಲಿ ಗುಲಾಮರ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿದುವು.  19ನೆಯ ಶತಮಾನದಲ್ಲಿ ಗುಲಾಮರ ಮಾರಾಟ ಕೇಂದ್ರಗಳು ರದ್ದಾದುವು.  ಅವುಗಳಿಗೆ ಪ್ರತಿಯಾಗಿ ತೆಂಗಿನ ವ್ಯಾಪಾರ ವೃದ್ಧಿಗೊಂಡಿತು.  1851ರಲ್ಲಿ ಫ್ರಾನ್ಸ್ ದೇಶ ದಹೋಮಿಯೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿತು;  ಆದರೆ ಒಪ್ಪಂದದ ಪ್ರಕಾರ ಫ್ರಾನ್ಸ್ ನಡೆದುಕೊಳ್ಳಲಿಲ್ಲವಾಗಿ ದಹೋಮಿ ಅರಸ ಫ್ರೆಂಚ್ ವ್ಯಾಪಾರದ ಕೋಠಿಗಳ ಮೇಲೆ ದಾಳಿ ನಡೆಸಿದ.  ಫ್ರೆಂಚರು ಅವನನ್ನು ಸೋಲಿಸಿ ರಾಜ್ಯವನ್ನು ವಶಪಡಿಸಿಕೊಂಡರು (1892).  ಜರ್ಮನಿಯೊಂದಿಗೆ 1897ರಲ್ಲಿ ಹಾಗೂ ಬ್ರಿಟಿಷ್‍ರೊಡನೆ 1898ರಲ್ಲಿ ಒಪ್ಪಂದಗಳನ್ನು ಮಾಡಿಕೊಂಡು ಫ್ರಾನ್ಸ್ ದಹೋಮೀ ರಾಜ್ಯದ ಗಡಿಗಳನ್ನು ನಿರ್ಧರಿಸಿಕೊಂಡಿತು.  ದಹೋಮೀ 1904ರಲ್ಲಿ ಫ್ರೆಂಚ್ ಪಶ್ಚಿಮ ಆಫ್ರಿಕದ ಪ್ರಾಂತ್ಯವಾಯಿತು.  ಫ್ರೆಂಚರು ರೈಲುರಸ್ತೆಗಳನ್ನು ಹಾಕಿ ಕಾಫಿ ಬೆಳೆಗೆ ಉತ್ತೇಜನ ನೀಡಿದರು.  1946ರ ಫ್ರೆಂಚ್ ಸಂವಿಧಾನದ ಪ್ರಕಾರ ಇದು ಫ್ರೆಂಚ್ ಒಕ್ಕೂಟದ ಸಮುದ್ರದಾಚೆಯ ಪ್ರಾಂತ್ಯವಾಯಿತು ; ಫ್ರಾನ್ಸಿನ ಪರಮಾಧಿಕಾರಕ್ಕೆ ಒಳಪಟ್ಟಂತೆ 1958ರಲ್ಲಿ ಸ್ವಯಮಾಡಳಿತ ರಾಜ್ಯವಾಯಿತು.  ತರುವಾಯ 1960ರ ಆಗಸ್ಟ್ 1ರಂದು ಫ್ರಾನ್ಸ್ ದೇಶದಿಂದ ಪ್ರತ್ಯೇಕಗೊಂಡು ಸ್ವತಂತ್ರ ಗಣರಾಜ್ಯವಾಯಿತು.  1960ರ ಸೆಪ್ಟೆಂಬರಿನಲ್ಲಿ ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆಯಿತು.

    1963ರಲ್ಲಿ ಕಾರ್ಮಿಕ ಸಂಘಗಳ ಹಾಗೂ ವಿದ್ಯಾರ್ಥಿಗಳ ಗಲಭೆಗಳಾಗಿ, ಅಧ್ಯಕ್ಷ ಹರ್ಬಟ್ ಮಾಗಾ ಸರ್ಕಾರ ಕುಸಿದುಬಿದ್ದು, ಕರ್ನಲ್ ಕ್ರಿಸ್ಟೊಫೆ ಸೊಗ್ಲೆ ಮಧ್ಯಸ್ತಿಕೆಯಲ್ಲಿ ಜಸ್ಟಿನ್ ಆಹೊಮಡೆಗ್‍ಬೀ ಮತ್ತು ಸೌರಾ ಮಿಗಾನ್ ಅಪಿಪ್ತೀ ಇವರ ಜಂಟಿ ಸರ್ಕಾರ ಏರ್ಪಟ್ಟಿತು.  ಸೊಗ್ಲೊ ರಾಷ್ಟ್ರಾಧ್ಯಕ್ಷರಾದರು.  1965ರ ನವೆಂಬರ್ ಮತ್ತು ಡಿಸೆಂಬರ್‍ನಲ್ಲಿ ಸೈನ್ಯ ಮತ್ತೆ ಎರಡು ಬಾರಿ ಆಡಳಿತದಲ್ಲಿ ಮಧ್ಯೆ ಪ್ರವೇಶಿಸಿತು ; ಸೊಗ್ಲೊ ಎರಡನೆಯ ಬಾರಿ ರಾಷ್ಟ್ರಾಧ್ಯಕ್ಷರಾದರು.  ರಾಜ್ಯವನ್ನು ಸಿವಿಲ್ ಆಡಳಿತಕ್ಕೆ ತರುವ ಉದ್ದೇಶದಿಂದ ಡಿಸೆಂಬರ್ 1967ರಲ್ಲಿ ಯುವಕ ಅಧಿಕಾರಿಗಳ ತಂಡವೊಂದು ಸೊಗ್ಲೊ ಸರ್ಕಾರವನ್ನು ಉರುಳಿಸಿ ಲೆಫ್ಟೆನಂಟ್ ಕರ್ನಲ್ ಅಲ್ಪೊನ್ಸೆ ಅಲ್ಲೆಯನ್ನು ರಾಷ್ಟ್ರಾಧ್ಯಕ್ಷರನ್ನಾಗಿ ತಂದಿತು.  ಹೊಸ ಸಂವಿಧಾನದ ರಚನೆಯಾಯಿತು.  1968ರ ಮೇ ತಿಂಗಳಲ್ಲಿ ರಾಷ್ಟ್ರಾಧ್ಯಕ್ಷನ ಆಯ್ಕೆಗೆ ಚುನಾವಣೆಗಳು ನಡೆದುವು.  ದೇಶಾದ್ಯಂತ ಜನರು ಮತದಾನ ನೀಡಲು ಮುಂದಾಗಲಿಲ್ಲವಾಗಿ ಚುನಾವಣೆ ರದ್ದಾಗಿ ಡಾ. ಎಮಿಲ್ ಡರ್ಲಿನ್ ಜಿûನ್‍ಸೌ ಅಧ್ಯಕ್ಷರಾಗಿ ನೇಮಕವಾದರು.  1969ರಲ್ಲಿ ಪುನಃ ಸೈನ್ಯ ಮಧ್ಯೆ ಪ್ರವೇಶಿಸಿತು.  1970ರಲ್ಲಿ ನಡೆದ ಚುನಾವಣೆಗಳು ಕೂಡ ಗಲಭೆಗಳಿಂದಾಗಿ ವಿಫಲಗೊಂಡುವು.  ರಾಷ್ಟ್ರಾಧ್ಯಕ್ಷನ ಸ್ಥಾನಕ್ಕೆ ಅಭ್ಯರ್ಥಿಗಳು ಸರದಿಯ ಪ್ರಕಾರ ನೇಮಕವಾಗುವಂತೆ ಮೂವರು ಅಭ್ಯರ್ಥಿಗಳುಳ್ಳ ಒಂದು ಅಧ್ಯಕ್ಷ ಪರಿಷತ್ತು ಏರ್ಪಟ್ಟಿತು.  1972ರ ಅಕ್ಟೋಬರ್‍ನಲ್ಲಿ ಮೇಜರ್ ಮ್ಯಾತ್ಯೂ ಕೆರೆಕೌ ನಡೆಸಿದ ಕ್ಷಿಪ್ರಾಕ್ರಮಣದಲ್ಲಿ ಅಧ್ಯಕ್ಷ ಪರಿಷತ್ತು ರದ್ದಾಗಿ ಸೈನಿಕ ಸರ್ಕಾರ ಏರ್ಪಟ್ಟಿತು.  1973ರ ಏಪ್ರಿಲಿನಲ್ಲಿ ಸರ್ಕಾರವನ್ನು ಉರುಳಿಸಲು ಅಲ್ಪೊನ್ಸೆ ಅಲ್ಲೆ ಪ್ರಯತ್ನಿಸಿದರು.  1975ರ ಜನವರಿಯಲ್ಲಿ ಮಂತ್ರಿ ಕ್ಯಾಪ್ಟನ್ ಜಾನ್ವೀರ್  ಅಸೋಗ್ಬ ಕ್ಷಿಪ್ರಾಕ್ರಮಣ ಪ್ರಯತ್ನ ನಡೆಸಿ ಬಂಧಿತರಾದರು.  ಮ್ಯಾತ್ಯೂ ಕೆರೆಕೌ 1974ರ ಡಿಸೆಂಬರನಲ್ಲಿ ತಮ್ಮ ಸರ್ಕಾರ ಮಾಕ್ರ್ಸ್- ಲೆನಿನ್ ಸಮಾಜವಾದವನ್ನು ಅನುಸರಿಸುವುದಾಗಿ ಘೋಷಿಸಿದರು.

	ಆಡಳಿತ :  ಕೋಟನೂ, ಪೋರ್ಟ-ನೋವೋ ಮತ್ತು ರಾಜ್ಯದ ಉತ್ತರ ಭಾಗ-ಈ ಮೂರು ಪ್ರದೇಶಗಳಿಂದ ಆಯ್ಕೆಯಾದ ಸೈನಿಕ ಅಧಿಕಾರಿಗಳ ಆಡಳಿತಕ್ಕೊಳಪಟ್ಟ ಸರ್ಕಾರ 1973ರ ಸೆಪ್ಟೆಂಬರ್ 1ರಂದು ಏರ್ಪಟ್ಟಿತು.  ಕ್ರಾಂತಿಯ ರಾಷ್ಟ್ರೀಯ ಪರಿಷತ್ತು 67 ಸದಸ್ಯರಿಂದ ಕೂಡಿದ್ದು ಸರ್ಕಾರದ ಕಾರ್ಯನೀತಿಯನ್ನು ನಿರ್ಧರಿಸಲು ಸಹಾಯಕವಾಗಿದೆ.  ಈ ಸದಸ್ಯರಲ್ಲಿ 30 ಮಂದಿ ನಾಗರಿಕರು ;  ಉಳಿದವರು ಸೈನಿಕ ಅಧಿಕಾರಿಗಳು.  ರಾಷ್ಟ್ರೀಯ ಪರಿಷತ್ತಿನ ಅಧ್ಯಕ್ಷ ರಾಷ್ಟ್ರಪತಿ.

	ಫೆಬ್ರುವರಿ 1974ರಲ್ಲಿ ರಾಜ್ಯವನ್ನು 6 ಪ್ರಾಂತ್ಯಗಳಾಗಿ ವಿಭಜಿಸಿ, ಪ್ರತಿ ಪ್ರಾಂತ್ಯದಲ್ಲೂ ಜಿಲ್ಲೆಗಳನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಯಿತು.  ಗ್ರಾಮಾಂತರ ಹಾಗೂ ಪೌರ ಪ್ರದೇಶಗಳ ಕನಿಷ್ಠ ಆಡಳಿತ ಘಟಕಗಳಾದ ಕಮ್ಯೂನ್‍ಗಳಿಗೆ ಕ್ರಾಂತಿಕಾರಿ ಸಮಿತಿಗಳು ನೇಮಕವಾಗಿವೆ.  ಗ್ರಾಮಗಳ ಆಡಳಿತವನ್ನು ಸ್ಥಳೀಯ ಕ್ರಾಂತಿಕಾರಿ ಸಮಿತಿಗಳು ವಹಿಸಿವೆ.

	ಸರ್ವೋಚ್ಚ ನ್ಯಾಯಾಲಯ ಮತ್ತು ಅಪೀಲು ನ್ಯಾಯಾಲಯಗಳು ಕೋಟನೂ ನಗರದಲ್ಲಿವೆ.  ಪ್ರಮುಖ ಪಟ್ಟಣಗಳಲ್ಲಿ ದಂಡಾಧೀಶರ ನ್ಯಾಯಲಯಗಳುಂಟು.

	ಶಿಕ್ಷಣ :  ಸರ್ಕಾರ ಹಾಗೂ ಕ್ರೈಸ್ತಮತ ಪ್ರಚಾರ ಸಂಸ್ಥೆಗಳು ಶಿಕ್ಷಣದ ಹೊಣೆ ವಹಿಸಿದೆ.  1971-72ರಲ್ಲಿ 852 ಪ್ರಾಥಮಿಕ ಶಾಲೆಗಳು, 60 ಸೆಕಂಡರಿ ಶಾಲೆಗಳು, 4 ಶಿಕ್ಷಣ ತರಬೇತಿ ಶಾಲೆಗಳು ಇದ್ದುವು.  ದಹೋಮೀ ವಿಶ್ವವಿದ್ಯಾಲಯ 1970ರಲ್ಲಿ ಸ್ಥಾಪಿತವಾಯಿತು.

	ಆರ್ಥಿಕತೆ :  ರಾಜ್ಯದ ಮುಕ್ಕಾಲು ಭಾಗ ಜನರ ವೃತ್ತಿ ಬೇಸಾಯ.  ಅರಣ್ಯಗಳನ್ನು ಕಡಿದು ನೆಲವನ್ನು ಬೇಸಾಯಕ್ಕೆ ಒಳಪಡಿಸಲಾಗಿದೆ.  ಮುಖ್ಯ ಬೆಳೆಗಳು ತೆಂಗು, ಮುಸುಕಿನ ಜೋಳ, ಸೋರ್ಗಂ, ಗೆಣಸು, ಸುವರ್ಣಗೆಡ್ಡೆ, ದ್ವಿದಳ ಧಾನ್ಯಗಳು, ನೆಲಗಡಲೆ, ಹತ್ತಿ, ಕಾಫಿ, ಹೊಗೆಸೊಪ್ಪು, ಮತ್ತು ಮುಡಿಗೆಣಸು.  ವಾರ್ಷಿಕ ಮೀನು ಉತ್ಪನ್ನ ಸುಮಾರು 4,500 ಮೆಟ್ರಿಕ್ ಟನ್, ಕೊಬ್ಬರಿ ಎಣ್ಣೆಯ ಉತ್ಪಾದನೆ ಪ್ರಧಾನ ಕೈಗಾರಿಕೆ.  ಬೀರ್ ತಯಾರಿಕೆಯೂ ಆಗುತ್ತದೆ.  ರಾಜ್ಯದಿಂದ ರಫ್ತಾಗುವ ಸರಕುಗಳು ಕೊಬ್ಬರಿ, ಕೊಬ್ಬರಿ ಎಣ್ಣೆ, ಕಾಫಿ ಮತ್ತು ಹೊಗೆಸೊಪ್ಪು, ರಾಜ್ಯದಲ್ಲಿ ಸುಣ್ಣಕಲ್ಲು ಅಧಿಕವಾಗಿ ದೊರಕುತ್ತದೆ.  ಕಬ್ಬಿಣದ ಅದುರು, ಫಾಸ್ಫೇಟ್ ಮತ್ತು ಲವಣಗಳೂ ಸ್ವಲ್ಪಮಟ್ಟಿಗೆ ಸಿಗುತ್ತವೆ.

	ಸಾರಿಗೆ ಸಂಪರ್ಕ :  ರೈಲುಮಾರ್ಗಗಳ ಒಟ್ಟು ಉದ್ದ 579 ಕಿಮೀ.  ಕೋಟನೂ ರೇವುಪಟ್ಟಣದಿಂದ ಒಳನಾಡಿನ ಪ್ಯಾರಕೂವರೆಗೆ ಮುಖ್ಯ ರೈಲುಮಾರ್ಗ (438 ಕಿಮೀ) ಇದೆ.  ವೀಡ ರೇವು ಪಟ್ಟಣದಿಂದ ಸೆಗ್ ಬೊರೋನ್‍ಗೆ 34 ಕಿಮೀ.  ದೂರದ ಸಣ್ಣ ರೈಲುಮಾರ್ಗವುಂಟು.  ಕೋಟನೂದಿಂದ ಪೋರ್ಟ-ನೋವೋ ಮಾರ್ಗವಾಗಿ ನೈಜೀರಿಯ ಗಡಿಯವರೆಗೆ ಹಾಕಿರುವ ರೈಲುಮಾರ್ಗ 107 ಕಿಮೀ. ಉದ್ದವಿದೆ.  ರಸ್ತೆಗಳ ಒಟ್ಟು ಉದ್ದ 6,937 ಕಿಮೀ. (1975).  ರಾಜ್ಯದ ಮುಖ್ಯ ಬಂದರು ಕೋಟನೂ.  ಇಲ್ಲಿ ಹೊಸ ಬಂದರನ್ನು 1965ರಲ್ಲಿ ತೆರೆಯಲಾಯಿತು.  ಕೋಟನೂ ಪ್ರಮುಖ ವಿಮಾನ ನಿಲ್ದಾಣ.  ಇತರ ವಿಮಾನ ನಿಲ್ದಾಣಗಳು ಪ್ಯಾರಕೂ, ನ್ಯಾಟಟಿಂಗೂ, ಕಂಡಿ ಮತ್ತು ಅಬೋಮೀ.  ರಾಜ್ಯದ ಅಭಯಾರಣ್ಯಗಳಿಗೆ ಹಾಗೂ ಬೇಟೆಯ ಸ್ಥಳಗಳಿಗೆ ಹೋಗುವ ಪ್ರವಾಸಿಗಳಿಗೆ ಪ್ರವಾಸೋದ್ಯಮ ಇಲಾಖೆ ಸೌಲಭ್ಯಗಳನ್ನು ಕಲ್ಪಸಿದೆ.
 (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ